Greater Bengaluru News9 : ರಾಜ್ಯದ ಮಹಾನಗರ ಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ಖಾತಾ ವರ್ಗಾವಣೆ ಮತ್ತು ಖಾತಾ ನಕಲು ವಿತರಣೆಗೆ ರಾಜ್ಯ ಸರ್ಕಾರ ಏಕರೂಪದ ಶುಲ್ಕ ನಿಗದಿಪಡಿಸಿದೆ. ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಇನ್ಮುಂದೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಒಂದೇ ರೀತಿಯ ಶುಲ್ಕ ಅನ್ವಯವಾಗಲಿದೆ.
ಮನಬಂದಂತೆ ಶುಲ್ಕ ವಸೂಲಿಗೆ ಬ್ರೇಕ್:
ಈ ಹಿಂದೆ ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ತಮ್ಮದೇ ಆದ ರೀತಿಯಲ್ಲಿ ಖಾತಾ ವರ್ಗಾವಣೆ ಶುಲ್ಕವನ್ನು ನಿಗದಿಪಡಿಸಿ ವಸೂಲಿ ಮಾಡುತ್ತಿದ್ದವು. ಇದರಿಂದ ಸಾರ್ವಜನಿಕರಿಂದ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಇ-ಆಸ್ತಿ ತಂತ್ರಾಂಶದ ಮೂಲಕ ಖಾತಾ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಲ್ಕದ ವಿಚಾರವಾಗಿ ಉಂಟಾಗುತ್ತಿದ್ದ ಗೊಂದಲಗಳಿಗೆ ತೆರೆ ಎಳೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಖಾತಾ ವರ್ಗಾವಣೆಗೆ ಎಷ್ಟು ಶುಲ್ಕ?
ನೂತನ ಸುತ್ತೋಲೆಯ ಪ್ರಕಾರ, ನೋಂದಾಯಿತ ಮಾರಾಟ ಅಥವಾ ಕ್ರಯಪತ್ರಗಳ ಆಧಾರದ ಮೇಲೆ ಆಸ್ತಿ ಹಕ್ಕು ವರ್ಗಾವಣೆ ಮಾಡಿಸಿಕೊಳ್ಳಲು ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಅನ್ವಯ ವಿಧಿಸಲಾದ ಮುದ್ರಾಂಕ ಶುಲ್ಕದ ಶೇಕಡಾ 2ರಷ್ಟನ್ನು ಪಾವತಿಸಬೇಕು. ಇನ್ನು ದಾನಪತ್ರ, ವಿಭಾಗ ಪತ್ರ, ಮುದ್ರಾಂಕ ಶುಲ್ಕ ವಿಧಿಸದ ಇತರ ನೋಂದಣಿ ಪ್ರಕರಣಗಳು ಹಾಗೂ ಮರಣಪತ್ರಗಳ ಆಧಾರದ ಮೇಲೆ ಹಕ್ಕು ವರ್ಗಾವಣೆ ಮಾಡಿಸಿಕೊಳ್ಳಲು ಪ್ರತಿ ಪ್ರಕರಣಕ್ಕೆ ಕನಿಷ್ಠ 1,000 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
ನಮೂನೆ 2 ಮತ್ತು 3 ಪಡೆಯಲು ₹125 ಶುಲ್ಕ:
ಆಸ್ತಿಗಳಿಗೆ ಸಂಬಂಧಿಸಿದ ನಮೂನೆ 2, 2ಎ, 3 ಮತ್ತು 3ಎ ವಿತರಣೆಗೂ ಏಕರೂಪದ ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ನಮೂನೆಗಳನ್ನು ಪಡೆಯಲು 125 ರೂಪಾಯಿ ಪಾವತಿಸಬೇಕಾಗುತ್ತದೆ. ಅಲ್ಲದೆ, ನಮೂನೆ 2 ಮತ್ತು 3ರ ವಿತರಣಾ ಶುಲ್ಕವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇಕಡಾ 10ರಷ್ಟು ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.
ಈ ಸಂಬಂಧ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಆಯುಕ್ತರು, ಜಿಲ್ಲಾ ನಗರಾಭಿವೃದ್ಧಿ ಕೋಶಗಳ ಯೋಜನಾ ನಿರ್ದೇಶಕರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗಳಿಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೂಚನೆ ನೀಡಿದ್ದಾರೆ. ಇದರಿಂದ ರಾಜ್ಯದಾದ್ಯಂತ ಖಾತಾ ವರ್ಗಾವಣೆ ಮತ್ತು ದಾಖಲೆಗಳ ನಕಲು ಪಡೆಯುವ ಪ್ರಕ್ರಿಯೆಯಲ್ಲಿ ಏಕರೂಪತೆ ಬರಲಿದ್ದು, ಸಾರ್ವಜನಿಕರಿಗೆ ಶುಲ್ಕದ ವಿಚಾರದಲ್ಲಿ ಉಂಟಾಗುತ್ತಿದ್ದ ಗೊಂದಲ ಕಡಿಮೆಯಾಗುವ ನಿರೀಕ್ಷೆಯಿದೆ.

