Greater Bengaluru News9 : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸ ಮತ್ತು ವಿಧಾನಸೌಧಕ್ಕೆ ಬಾಂಬ್ ಇರಿಸಿರುವುದಾಗಿ ಅಪರಿಚಿತನೊಬ್ಬ ಬೆದರಿಕೆ ಒಡ್ಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕನ ಫೋನ್ ಮೂಲಕ ಪೊಲೀಸರೊಂದಿಗೆ ಮಾತನಾಡಿದ ಅನಾಮಿಕ ವ್ಯಕ್ತಿ ಈ ಹುಸಿ ಬೆದರಿಕೆ ಹಾಕಿದ್ದಾನೆ.
ನವೆಂಬರ್ 7ರಂದು ‘ನಮ್ಮ ಯಾತ್ರಿ’ ಆ್ಯಪ್‌ನಲ್ಲಿ ಆಟೋ ಓಡಿಸುತ್ತಿದ್ದ ಭಗವಂತರಾಯನ್ ಅವರಿಗೆ, ಕಾರ್ತಿಕ್ ಎಂಬ ಹೆಸರಿನ ವ್ಯಕ್ತಿಯಿಂದ ಸದಾಶಿವನಗರದಿಂದ ಆರ್.ಆರ್. ನಗರಕ್ಕೆ ತೆರಳಲು ಬುಕ್ಕಿಂಗ್ ಬಂದಿತ್ತು. ಬುಕ್ಕಿಂಗ್ ಮಾಡಿದ ವ್ಯಕ್ತಿ ಸಿಎಂ ನಿವಾಸದ ಸಮೀಪದ ಪಿಕಪ್ ಲೊಕೇಶನ್ ಹಂಚಿಕೊಂಡಿದ್ದ. ಆ ಸ್ಥಳಕ್ಕೆ ತಲುಪಿದ ಚಾಲಕ, ಪ್ರಯಾಣಿಕನಿಗೆ ಕರೆ ಮಾಡಿದಾಗ, ತಾನು ಸಿಎಂ ಮನೆಯಲ್ಲಿದ್ದು, ಹೊರಗಿನ ಬ್ಯಾರಿಕೇಡ್ ಬಳಿ ಇರುವ ಪೊಲೀಸರಿಗೆ ಫೋನ್ ನೀಡುವಂತೆ ಆತ ಸೂಚಿಸಿದ್ದಾನೆ.
ಚಾಲಕ ಭಗವಂತರಾಯನ್ ಅವರು ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಮೊಬೈಲ್ ನೀಡಿದಾಗ, ಕರೆ ಕಡಿತಗೊಳಿಸುವ ಮುನ್ನ ಅಪರಿಚಿತ ವ್ಯಕ್ತಿ ಸಿಎಂ ಮನೆ ಮತ್ತು ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಮೊದಲು ಆಟೋವನ್ನು ತಪಾಸಣೆ ನಡೆಸಿ, ನಂತರ ಸಿಎಂ ನಿವಾಸ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯ ಕೈಗೊಂಡರು. ಪರಿಶೀಲನೆಯ ಬಳಿಕ ಇದೊಂದು ಹುಸಿ ಬೆದರಿಕೆ ಕರೆ ಎಂಬುದು ದೃಢಪಟ್ಟಿದೆ.
ಸದ್ಯ ಆಟೋ ಚಾಲಕ ಭಗವಂತರಾಯನ್ ನೀಡಿದ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರೆ ಮಾಡಿದ ಕಿಡಿಗೇಡಿಯ ಪತ್ತೆಗೆ ತನಿಖೆ ಮುಂದುವರಿದಿದೆ.

