Greater Bengaluru News9 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಜಾರಿಯಾದ ಬೆನ್ನಲ್ಲೇ, ನಗರದ ಮೊದಲ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಆರ್. ಹಿತೇಂದ್ರ ಮೊದಲ ದಿನವೇ ಕಾರ್ಯಪ್ರವೃತ್ತರಾಗಿದ್ದಾರೆ. ಐವರು ನೂತನ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅವರು, ಇಲಾಖೆಯಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ಕಾನೂನು ಪಾಲನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಳಗ್ಗೆಯೇ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಹಿತೇಂದ್ರ, ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ಅಶಿಸ್ತು ಅಥವಾ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಆರ್. ಹಿತೇಂದ್ರ, ಪೊಲೀಸ್ ಮ್ಯಾನುವಲ್ನಲ್ಲಿ ನಿಗದಿಪಡಿಸಿರುವ ನಿಯಮಗಳ ಪ್ರಕಾರ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಪೊಲೀಸ್ ಮ್ಯಾನುವಲ್ನಲ್ಲಿ ಏನು ನಿಯಮಗಳಿವೆಯೋ ಅದರಂತೆ ಎಲ್ಲರೂ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಯಾವುದೇ ರೀತಿಯ ಅಶಿಸ್ತನ್ನು ನಾನು ಸಹಿಸುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಫಿಯಾ ಜತೆ ಕೈಜೋಡಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ!
ಪೊಲೀಸ್ ಅಧಿಕಾರಿಗಳು ಕಾನೂನುಬದ್ಧವಾಗಿ ಮಾತ್ರ ಕೆಲಸ ಮಾಡಬೇಕು. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವುದು, ಮಾಫಿಯಾಗಳೊಂದಿಗೆ ಕೈಜೋಡಿಸುವುದು ಅಥವಾ ಭ್ರಷ್ಟಾಚಾರದಲ್ಲಿ ತೊಡಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹಿತೇಂದ್ರ ಸ್ಪಷ್ಟಪಡಿಸಿದ್ದಾರೆ. ಕರ್ತವ್ಯದಲ್ಲಿ ತಪ್ಪು ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
‘ರೌಡಿ ಸ್ಕ್ವಾಡ್ ಇದೆ ಅಂತ ಮೈಮರೆಯಬೇಡಿ’
ನಗರದಲ್ಲಿ ರೌಡಿ ಸ್ಕ್ವಾಡ್ ಇದೆ ಎಂಬ ಕಾರಣಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹಿತೇಂದ್ರ ಸೂಚಿಸಿದ್ದಾರೆ. ಐವರು ಪೊಲೀಸ್ ಆಯುಕ್ತರು ತಮ್ಮ ವ್ಯಾಪ್ತಿಯ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಸೂಚನೆಗಳನ್ನು ಸ್ಪಷ್ಟವಾಗಿ ತಲುಪಿಸಬೇಕು ಎಂದು ಆದೇಶಿಸಿದ್ದಾರೆ.
ಬೆಂಗಳೂರಿನ ಪೊಲೀಸ್ ಆಡಳಿತದಲ್ಲಿ ಹೊಸ ಅಧ್ಯಾಯ!
ಬೆಂಗಳೂರಿಗೆ ಐವರು ಪೊಲೀಸ್ ಆಯುಕ್ತರು ಹಾಗೂ ಓರ್ವ ಮುಖ್ಯ ಪೊಲೀಸ್ ಆಯುಕ್ತರನ್ನು ನೇಮಿಸುವ ಮೂಲಕ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಈ ಹೊಸ ವ್ಯವಸ್ಥೆಯಿಂದ ದಶಕಗಳ ಇತಿಹಾಸ ಹೊಂದಿದ್ದ ಏಕೈಕ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ತೆರೆಬಿದ್ದಿದೆ. 1963ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನೇತೃತ್ವದ ಸರ್ಕಾರ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಅಧಿಕೃತವಾಗಿ ಸ್ಥಾಪಿಸಿತ್ತು. ಆರಂಭದಲ್ಲಿ 37 ಪೊಲೀಸ್ ಠಾಣೆಗಳೊಂದಿಗೆ ಕಾರ್ಯಾರಂಭ ಮಾಡಿದ್ದ ಈ ವ್ಯವಸ್ಥೆಗೆ ಡಿಐಜಿಪಿ ದರ್ಜೆಯ ಅಧಿಕಾರಿ ಸಿ. ಚಾಂಡಿ ಮೊದಲ ಪೊಲೀಸ್ ಆಯುಕ್ತರಾಗಿದ್ದರು.
63 ವರ್ಷಗಳಲ್ಲಿ 39 ಐಪಿಎಸ್ ಅಧಿಕಾರಿಗಳು ಆಯುಕ್ತರು!
1963ರಿಂದ ಇಲ್ಲಿಯವರೆಗೆ ಒಟ್ಟು 39 ಐಪಿಎಸ್ ಅಧಿಕಾರಿಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಈ ಪೈಕಿ 1983ರಿಂದ 1986ರವರೆಗೆ ಸುಮಾರು 3 ವರ್ಷ 9 ತಿಂಗಳ ಕಾಲ ಸೇವೆ ಸಲ್ಲಿಸಿದ್ದ ಪಿ.ಜಿ. ಹರ್ಲಂಕರ್ ಅವರು ಅತಿ ದೀರ್ಘಾವಧಿಯ ಪೊಲೀಸ್ ಆಯುಕ್ತರಾಗಿದ್ದಾರೆ. ಇನ್ನು 2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಅಲೋಕ್ ಕುಮಾರ್ ಅವರು ಅತ್ಯಂತ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದ ಪೊಲೀಸ್ ಆಯುಕ್ತ ಎಂಬ ದಾಖಲೆ ಹೊಂದಿದ್ದಾರೆ.
ಕೇವಲ 37 ಪೊಲೀಸ್ ಠಾಣೆಗಳಿಂದ ಆರಂಭವಾದ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಇದೀಗ ಐದು ಪ್ರತ್ಯೇಕ ಕಮಿಷನರೇಟ್ಗಳಾಗಿ ವಿಭಜನೆಯಾಗಿದೆ. ಈ ನಡುವೆ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಆರ್. ಹಿತೇಂದ್ರ ಇಲಾಖೆಯ ಶಿಸ್ತು ಹಾಗೂ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದು ಗಮನ ಸೆಳೆದಿದೆ.

