Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಬ್ಯಾಟರಾಯನಪುರ ಉಪ ವಿಭಾಗದ ಜಕ್ಕೂರಿನಲ್ಲಿ 49 ನಿವೇಶನಗಳಿಗೆ ಅಕ್ರಮವಾಗಿ ‘ಎ’ ಖಾತಾ ವಿತರಿಸಿರುವ ಪ್ರಕರಣದಲ್ಲಿ,ಅಮಾಯಕ ಅಧಿಕಾರಿಗಳನ್ನು ಬಲಿಪಶು ಮಾಡುವ ಪ್ರಯತ್ನ ಸದ್ದಿಲ್ಲದೇ ನಡೆದಿದೆ. ಆ ಮೂಲಕ ನಕಲಿ ಖಾತಾ ಪುಸ್ತಕ ಸೃಷ್ಟಿಸಿದ ಹಾಗೂ ಫೋರ್ಜರಿ ಸಹಿ ಮಾಡಿದವರ ರಕ್ಷಣೆಗೆ ಯತ್ನಿಸಲಾಗುತ್ತಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಬ್ಯಾಟರಾಯನಪುರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ಜಕ್ಕೂರು ಗ್ರಾಮದ ಸರ್ವೇ ನಂ. 110/3ರ 2.05 ಎಕರೆಯಲ್ಲಿಅನಧಿಕೃತವಾಗಿ ನಿರ್ಮಿಸಿರುವ ಬಡಾವಣೆಯಲ್ಲಿ 49 ನಿವೇಶನಗಳನ್ನು ವಿಭಜಿಸಲಾಗಿದೆ. ಬಳಿಕ ಈ ನಿವೇಶನಗಳಿಗೆ ಅಕ್ರಮವಾಗಿ ಎ-ಖಾತಾಗಳನ್ನು ನೋಂದಾಯಿಸಿ ವಿತರಿಸಲಾಗಿದೆ. ಖಾತಾ ನೋಂದಣಿ, ತೆರಿಗೆ ನಿಗದಿ ಸಂದರ್ಭದಲ್ಲಿಉಪ ಆಯುಕ್ತರು, ಜಂಟಿ ಆಯುಕ್ತರ ಅನುಮೋದನೆಯನ್ನೇ ಪಡೆದಿಲ್ಲ. ಬದಲಿಗೆ ಸಹಾಯಕ ಕಂದಾಯ ಅಧಿಕಾರಿಯು ತಾವೇ ಸ್ವತಃ ಬಯೋಮೆಟ್ರಿಕ್ ಮೂಲಕ ಲಾಗಿನ್ನಲ್ಲಿಸೃಜಿಸಿ ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳದೆಯೇ ಎ-ಖಾತಾವನ್ನು ನಿಯಮಬಾಹಿರವಾಗಿ ನೋಂದಾಯಿಸಿ ಅಕ್ರಮವೆಸಗಿದ್ದಾರೆ. ಆ ಮೂಲಕ ಪಾಲಿಕೆಗೆ ಕೋಟ್ಯಂತರ ರೂ. ವಂಚಿಸಿದ್ದಾರೆ.
ಜಕ್ಕೂರು ಗ್ರಾಮದ ಸರ್ವೇ ನಂ.110/3ರಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಅಭಿವೃದ್ಧಿ ಶುಲ್ಕ ವಂಚಿಸಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ದೂರುಗಳು ಬಂದಿದ್ದವು. ಈ ಸಂಬಂಧ ಪರಿಶೀಲನೆ ನಡೆಸಿದ ಉಪ ಆಯುಕ್ತರು, ಸಹಾಯಕ ಕಂದಾಯ ಅಧಿಕಾರಿಯು 49 ನಿವೇಶನಗಳಿಗೆ ನಿಯಮಬಾಹಿರವಾಗಿ ‘ಎ’ ಖಾತಾ ನೋಂದಾಯಿಸಲಾಗಿದೆ ಎಂದು ವರದಿ ನೀಡಿದ್ದರು. ಅದರಂತೆ ಎಆರ್ಒ ರೇಖಾ ಅವರನ್ನು ಸೇವೆಯಿಂದ ಅಮಾನತು ಮಾಡಿ ಏ.22ರಂದು ಆದೇಶಿಸಲಾಗಿತ್ತು.
ಉಪ ಆಯುಕ್ತರ ವರದಿ ಮೇರೆಗೆ ಹೆಚ್ಚುವರಿ ಆಯುಕ್ತರು (ಕಂದಾಯ) ಪರಿಶೀಲನೆ ನಡೆಸಿ, ಜೂ.1ರಂದು ಕಂದಾಯ ದಾಖಲೆ ಪುಸ್ತಕ ಎ-70 ಸ್ಕ್ಯಾನಿಂಗ್ ಆಗಿರುವ ಆಸ್ತಿ ವಹಿಯಲ್ಲಿಪುಟದ ಸಂಖ್ಯೆ 12 ರಿಂದ 24ರವರೆಗೆ ಒಟ್ಟು 49 ಸ್ವತ್ತುಗಳಿಗೆ 2024ರ ಮಾ. 25 ರಿಂದ 26ರಂದು ನಿಯಮಬಾಹಿರವಾಗಿ ನೋಂದಾಯಿಸಿರುವ 49 ಎ-ಖಾತಾಗಳನ್ನು ರದ್ದುಪಡಿಸಿ ಆದೇಶಿಸಿದ್ದಾರೆ. ಬಳಿಕ ಇ-ಆಸ್ತಿ ತಂತ್ರಾಂಶದಲ್ಲಿಸಹ ತೆಗೆಸಲಾಗಿದೆ. ಈ ಪ್ರಕರಣದಲ್ಲಿ ಜಂಟಿ ಆಯುಕ್ತರ ಪಾತ್ರ ಕಂಡುಬಂದಿಲ್ಲವೆಂದು ಷರಾ ಬರೆದಿದ್ದರು.
ಎ-70 ಖಾತಾ ಪುಸ್ತಕವೇ ನಕಲಿ:
ಬಿಲ್ಡರ್ಗಳೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು 49 ನಿವೇಶನಗಳಿಗೆ ಖಾತೆಗಳನ್ನು ಕ್ರಮವಾಗಿ ದಾಖಲಿಸುವ ಏಕೈಕ ಉದ್ದೇಶದಿಂದ ಎ-70 ಎಂಬ ನಕಲಿ ಕಂದಾಯ ದಾಖಲೆ ಪುಸ್ತಕವನ್ನು ಸೃಜಿಸಿ, ಅಕ್ರಮವಾಗಿ ಎ-ಖಾತಾಗಳನ್ನು ನೋಂದಾಯಿಸಿ ದಾಖಲಿಸಿದ್ದಾರೆ. ಇದರಲ್ಲಿಈ ಹಿಂದೆ ಕಾರ್ಯ ನಿರ್ವಹಿಸಿದ ಅಧಿಕಾರಿ ಹಾಗೂ ನೌಕರರ ಸಹಿಗಳನ್ನು ಫೋರ್ಜರಿ ಮಾಡಿ, ಪುಸ್ತಕವನ್ನು ಸ್ಕ್ಯಾನ್ ಹಾಗೂ ಡಿಜಿಟಲೀಕರಣಗೊಳಿಸಿ ಇ-ತಂತ್ರಾಂಶದಲ್ಲಿಅಪ್ಲೋಡ್ ಮಾಡಿದ್ದಾರೆ.
ಕೇವಲ ಒಂದೇ ಒಂದು ಖಾತಾ ಪುಸ್ತಕದ ಪರಿಶೀಲನೆಯಲ್ಲಿ 70ಕ್ಕೂ ಅಧಿಕ ನಿವೇಶನಗಳಿಗೆ ಅಕ್ರಮವಾಗಿ ಎ-ಖಾತಾ ವಿತರಿಸಿರುವುದು ಬೆಳಕಿಗೆ ಬಂದಿದೆ. ಮತ್ತೊಮ್ಮೆ ಪುನರ್ ಪರಿಶೀಲಿಸಿದಾಗ 79 ನಕಲಿ ಖಾತಾಗಳಿರುವುದು ಪತ್ತೆಯಾಗಿದೆ. ಆದರೆ, ಈ ಕುರಿತಂತೆ ಅಧಿಕೃತ ತನಿಖಾ ವರದಿ ಈವರೆಗೆ ಪೂರ್ಣಗೊಂಡಿಲ್ಲ.
ನಿಯಮಾವಳಿಗಳ ಪ್ರಕಾರ ‘ಬಿ’ ಖಾತಾ ಹೊಂದಿರುವ ಆಸ್ತಿಯನ್ನು ಎ-ಖಾತೆಗೆ ಪರಿವರ್ತಿಸಲು ಮಾರ್ಗಸೂಚಿ ದರದ ಶೇ. 5ರಷ್ಟು ಶುಲ್ಕ ಪಾವತಿಸಬೇಕು. ಆದರೆ, 49 ನಿವೇಶನಗಳಿಗೆ ಮಾರ್ಗಸೂಚಿ ದರದ ಶೇ. 5ರಷ್ಟು ಸುಧಾರಣಾ ಶುಲ್ಕ, ಭೂಪರಿವರ್ತನೆ ಶುಲ್ಕ ಹಾಗೂ ಇತರೆ ಶುಲ್ಕಗಳನ್ನು ಪಾವತಿಸಿಕೊಳ್ಳದೆಯೇ ಅಕ್ರಮವಾಗಿ ಎ-ಖಾತಾಗಳನ್ನು ವಿತರಿಸಲಾಗಿದೆ. ಆ ಮೂಲಕ ಪಾಲಿಕೆಗೆ ಕೋಟ್ಯಂತರ ರೂ. ವಂಚಿಸಲಾಗಿದೆ.
ಬ್ಯಾಟರಾಯನಪುರ ಉಪ ವಿಭಾಗ ವ್ಯಾಪ್ತಿಯ ವಾರ್ಡ್ ಸಂಖ್ಯೆ 5 ಮತ್ತು 6ರಲ್ಲಿನ ‘ಎ’ ಮತ್ತು ‘ಬಿ’ ಖಾತಾಗಳನ್ನು ಸ್ಕ್ಯಾನಿಂಗ್ಗಾಗಿ ಸ್ಟಾಂಪಿಂಗ್ ಮತ್ತು ಸೀಲಿಂಗ್ ಮಾಡಲಾಗಿತ್ತು. ಒಟ್ಟು 74 ‘ಎ’ ರಿಜಿಸ್ಟ್ರಾರ್ ಹಾಗೂ 92 ‘ಬಿ’ ರಿಜಿಸ್ಟ್ರಾರ್ ಸೇರಿ ಒಟ್ಟು 166 ಕೈಬರಹದ ಖಾತಾ ನೋಂದಣಿ ರಿಜಿಸ್ಟ್ರಾರ್ಗಳನ್ನು ಜಂಟಿ ಆಯುಕ್ತರ ವಲಯ ಕಚೇರಿಯಲ್ಲಿಟ್ಟು 2025ರ ಜ.1ರಂದು ಸೀಲ್ ಮಾಡಲಾಗಿತ್ತು. ಉಪ ವಿಭಾಗದಲ್ಲಿಒಂದೇ ಒಂದು ಖಾತಾ ನೋಂದಣಿ ರಿಜಿಸ್ಟರ್ ಅನ್ನು ಮಾತ್ರ ನಿರ್ವಹಣೆ ಮಾಡಬೇಕೆಂದು ಕಂದಾಯ ವಿಭಾಗದ ವಿಶೇಷ ಆಯುಕ್ತರು ಆದೇಶಿಸಿದ್ದರು.
ಆನಂತರವೇ ಎ-70 ಎಂಬ ಮೂಲ ಕಡತವನ್ನು ಹೊರ ತೆಗೆದು, ಇಡೀ ಪುಸ್ತಕವನ್ನೇ ನಕಲು ಮಾಡಲಾಗಿದೆ. ಎ-70 ವಹಿಯಲ್ಲಿನ ಪುಟದ ಸಂಖ್ಯೆ 12 ರಿಂದ 24ರವರೆಗಿನ ಪುಟಗಳಲ್ಲಿ49 ಸ್ವತ್ತುಗಳನ್ನು 2024ರ ಮಾ.25, 26ರಂದು ನಮೂದಿಸಲಾಗಿದೆ. ಆದರೆ, ಈ ಪುಟಗಳಲ್ಲಿಅನುಮೋದನೆಗೊಂಡ ಕಡತದ ಸಂಖ್ಯೆಯನ್ನೇ ನಮೂದಿಸಿಲ್ಲ. ಈ ದಾಖಲಾತಿ ತಮ್ಮ ಕೈಬರಹದ್ದಲ್ಲ. ಈ ಸ್ವತ್ತುಗಳ ಖಾತಾ ಸಂಬಂಧಿತ ಕಡತಗಳನ್ನು ತಾವು ನಿರ್ವಹಿಸಿರುವುದಿಲ್ಲವೆಂದು ವಿಷಯ ನಿರ್ವಾಹಕರೇ ಸ್ಪಷ್ಟಪಡಿಸಿದ್ದಾರೆ.
ಮೂಲ ಕಂದಾಯ ಪುಸ್ತಕವೇ ಮಾಯ:
ಆಶ್ಚರ್ಯ ಎಂದರೆ, ಕಂದಾಯ ವಿಭಾಗದ ಉಪ ಆಯುಕ್ತರು ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಯನ್ನೇ ತನಿಖಾಧಿಕಾರಿಯಾಗಿ ನೇಮಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಬಗ್ಗೆ ವಿಷಯ ನಿರ್ವಾಹಕರು ಲಿಖಿತವಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಅವರು ನೀಡಿರುವ ಲಿಖಿತ ಉತ್ತರದಲ್ಲಿ ಮೂಲ ಕಂದಾಯ ಪುಸ್ತಕ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಯಾರ ಸಹಿಯನ್ನು ಫೋರ್ಜರಿ ಮಾಡಲಾಗಿತ್ತೋ, ಅದೇ ಸಿಬ್ಬಂದಿಯನ್ನು ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಸುತ್ತಿರುವ ಆರೋಪಗಳು ಕೇಳಿಬಂದಿವೆ.
‘ಇ-ಆಸ್ತಿ ತಂತ್ರಾಂಶದಲ್ಲಿ ಪುಟ ಸಂಖ್ಯೆ 196ರವರೆಗೆ ಮಾತ್ರ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗಿದೆ. ಆದರೆ, ಹಲವು ಪುಟಗಳನ್ನು ಅಪ್ಲೋಡ್ ಮಾಡಿಲ್ಲ. ಅಪ್ಲೋಡ್ ಮಾಡಲಾಗಿರುವ ಪುಟಗಳನ್ನು ಪರಿಶೀಲಿಸಿದಾಗ ತಂತ್ರಾಂಶದಲ್ಲಿಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿರುವ ಎ-70 ಖಾತಾ ವಹಿಯು ನಕಲಿಯಾಗಿದೆ. ಕಂಪ್ಯೂಟರ್ನಲ್ಲಿಎ-70 ಪುಸ್ತಕದ ಸ್ಕ್ಯಾನ್ ಪ್ರತಿಯನ್ನು ಪರಿಶೀಲಿಸಿದಾಗ ಖಾತಾ ವಹಿಯ ಪುಟ ಸಂಖ್ಯೆ-2 (ಎಡಭಾಗ ಮಾತ್ರ), 198 ಮತ್ತು 199 ಪುಟಗಳನ್ನು ಹೊರತುಪಡಿಸಿ ಉಳಿದೆಲ್ಲಾಸ್ಕ್ಯಾನ್ ಪುಟಗಳು ನಕಲಿಯಾಗಿವೆ. ಇದರಲ್ಲಿರುವ ಬರವಣಿಗೆ, ಸಹಿ ನಮ್ಮದಲ್ಲ. ಮೂಲ ಎ-70 ಖಾತಾ ವಹಿಯನ್ನು ನೀಡಿದರೆ, ಸತ್ಯಾಸತ್ಯತೆ ಪರಿಶೀಲಿಸಿ ಮಾಹಿತಿ ನೀಡಲಾಗುವುದು’ ಎಂದು ವಿಷಯ ನಿರ್ವಾಹಕರಾದ ಪದ್ಮಾ, ಬಿ.ನಾಗೇಂದ್ರಪ್ಪ, ಎಸ್.ಸರವಣ, ಎನ್.ಪಂಚಾಲಯ್ಯ ಎಆರ್ಒಗೆ ಲಿಖಿತವಾಗಿ ಉತ್ತರಿಸಿದ್ದಾರೆ.
ಮುಖ್ಯ ಆಯುಕ್ತರ ಆದೇಶಕ್ಕೂ ಕಿಮ್ಮತ್ತಿಲ್ಲ:
ಸಹಾಯಕ ಕಂದಾಯ ಅಧಿಕಾರಿಗಳಾದ ಸಿ.ರೇಖಾ, ಕೃತಿಕಾ ಮತ್ತು ಗುರುಪ್ರಸನ್ನ ಅವರ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಕರಡು ದೋಷಾರೋಪಣಾ ಪಟ್ಟಿಯನ್ನು ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ಏ.23ರಂದೇ ಜಿಬಿಎ ಮುಖ್ಯ ಆಯುಕ್ತರ ಮಹೇಶ್ವರ ರಾವ್ ಉಪ ಆಯುಕ್ತರಿಗೆ ಸೂಚಿಸಿದ್ದರು. ಆದರೆ, ಈವರೆಗೆ ದೋಷಾರೋಪಣಾ ಪಟ್ಟಿ ಸ್ವೀಕೃತವಾಗಿಲ್ಲ. ಹೀಗಾಗಿ, ಮತ್ತೊಮ್ಮೆ ನ.4ರಂದು ಉತ್ತರ ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಈ ಅಧಿಕಾರಿಗಳ ವಿರುದ್ಧ ಕೂಡಲೇ ಇಲಾಖಾ ವಿಚಾರಣೆ ಆರಂಭಿಸಬೇಕಿದ್ದು, ಕರಡು ದೋಷಾರೋಪಣಾ ಪಟ್ಟಿಗಳು ಸಲ್ಲಿಕೆಯಾಗದಿದ್ದಲ್ಲಿ ಸಂಬಂಧಪಟ್ಟ ವಿಷಯ ನಿರ್ವಾಹಕರು ಹಾಗೂ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಚ್ಚರಿಕೆ ನೀಡಿದ್ದಾರೆ.

